Amos 7

ದುರ್ಗತಿಯ ಐದು ದರ್ಶನಗಳು

1ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು. ಹಿಂಗಾರು ಮಳೆಬಿದ್ದು ಪೈರು ಸೊಂಪಾಗುವುದಕ್ಕೆ ಆರಂಭವಾದಾಗ ಅಂದರೆ ರಾಜ್ಯಾದಾಯ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಯೆಹೋವನು ಮಿಡತೆಗಳನ್ನು ಉಂಟುಮಾಡಿದನು. 2ಅವು ದೇಶದ ಹುಲ್ಲನ್ನೆಲ್ಲಾ ತಿಂದುಬಿಟ್ಟ ಮೇಲೆ ನಾನು, <<ಕರ್ತನಾದ ಯೆಹೋವನೇ, ಲಾಲಿಸು, ನನ್ನನ್ನು ಕ್ಷಮಿಸು. ಯಾಕೋಬ ಜನಾಂಗವು ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗ>> ಎಂದು ವಿಜ್ಞಾಪಿಸಿಕೊಂಡೆನು. 3ಯೆಹೋವನು ಮನಮರುಗಿ, <<ಈ ದರ್ಶನವು ನೆರವೇರುವುದಿಲ್ಲ>> ಎಂದನು.

ಕ್ಷಾಮದ ದರ್ಶನ

4

ಕರ್ತನಾದ ಯೆಹೋವನು ಇನ್ನೊಂದು ದರ್ಶನವನ್ನು ನನಗೆ ತೋರಿಸಿದನು. ಇಗೋ, ಕರ್ತನಾದ ಯೆಹೋವನು ತನ್ನ ಜನರನ್ನು ದಂಡಿಸುವುದಕ್ಕಾಗಿ ಅಗ್ನಿಯನ್ನು ಕರೆದನು. ಅದು ಮಹಾ ಸಾಗರವನ್ನು ನುಂಗಿ ದೇಶವನ್ನೂ ತಿಂದುಬಿಟ್ಟಿತು.
5ಆಗ ನಾನು, <<ಕರ್ತನಾದ ಯೆಹೋವನೇ, ಲಾಲಿಸು. ಇದನ್ನು ನಿಲ್ಲಿಸಿಬಿಡು. ಯಾಕೋಬ ಜನಾಂಗ ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗವಾಗಿದೆ>> ಎಂದು ಆಜ್ಞಾಪಿಸಲು 6ಕರ್ತನಾದ ಯೆಹೋವನು ಮನಮರುಗಿ, <<ಈ ದರ್ಶನವು ನೆರವೇರುವುದಿಲ್ಲ>> ಎಂದನು.

ನೂಲುಗುಂಡಿನ ದರ್ಶನ

7

ಕರ್ತನು ಮತ್ತೊಂದು ದರ್ಶನವನ್ನು ನನಗೆ ತೋರಿಸಿದನು. ಇಗೋ, ಯೆಹೋವನು ನೂಲುಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದನು. ಆತನ ಕೈಯಲ್ಲಿ ನೂಲುಗುಂಡಿತ್ತು.
8ಯೆಹೋವನು ನನಗೆ, <<ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?>> ಎಂದು ಕೇಳಲು ನಾನು, <<ಒಂದು ನೂಲುಗುಂಡು>> ಎಂದು ಉತ್ತರ ಕೊಟ್ಟೆನು. ಆಗ ಕರ್ತನು, <<ಇಗೋ, ನನ್ನ ಜನರಾದ ಇಸ್ರಾಯೇಲಿನ ಮಧ್ಯದಲ್ಲಿ ನೂಲುಗುಂಡನ್ನು ಇಡುತ್ತೇನೆ. ಇನ್ನು ಅವರನ್ನು ಕಂಡುಕಾಣದಂತೆ ದಂಡಿಸುವೆನು.


9

ಇಸಾಕನ ವಂಶದವರ ಪೂಜಾಸ್ಥಳಗಳು ಹಾಳಾಗುವವು,

ಇಸ್ರಾಯೇಲಿನ ಪವಿತ್ರಾಲಯಗಳು ಪಾಳುಬೀಳುವವು,
ಮತ್ತು ನಾನು ಕತ್ತಿ ಹಿಡಿದು ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು>> ಅಂದನು.

ಆಮೋಸನು ಯಾಜಕನನ್ನು ಮುಖಾಮುಖಿಯಾಗಿ ಎದುರಿಸಿದ್ದು

10

ಆಗ ಬೇತೇಲಿನ ಯಾಜಕನಾದ ಅಮಚ್ಯನು, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ, <<ಆಮೋಸನು ಇಸ್ರಾಯೇಲರ ಮಧ್ಯದಲ್ಲಿ ನಿನ್ನ ಮೇಲೆ ಒಳಸಂಚು ಮಾಡಿದ್ದಾನೆ. ದೇಶವು ಅವನ ವಿಪರೀತವಾದ ಮಾತುಗಳನ್ನು ತಾಳಲಾರದು>> ಅಂದನು.
11ಅದಕ್ಕೆ ಆಮೋಸನು,

<<ಯಾರೊಬ್ಬಾಮನು ಖಡ್ಗದಿಂದ ಹತನಾಗುವನು.
ಇಸ್ರಾಯೇಲರು ಖಂಡಿತವಾಗಿ ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವರು>> ಎಂದು ಹೇಳಿಕಳುಹಿಸಿದನು.

12

ಅನಂತರ ಅಮಚ್ಯನು ಆಮೋಸನಿಗೆ, <<ಕಣಿ ಹೇಳುವವನೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲಿಯೇ ರೊಟ್ಟಿತಿಂದು ಪ್ರವಾದಿಸು.
13ಆದರೆ ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜಕೀಯ ಪವಿತ್ರಾಲಯ, ಇದು ಅರಮನೆ>> ಎಂದು ಹೇಳಿದನು.

14

ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ, <<ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನು, ಅತ್ತಿಹಣ್ಣುಗಳನ್ನು ಕೂಡಿಸುವವನು ಆಗಿದ್ದೇನೆ.
15ಯೆಹೋವನು ನನ್ನನ್ನು ಮಂದೆ ಕಾಯುವವರಿಂದ ತಪ್ಪಿಸಿ, <ನೀನು ಹೋಗಿ ನನ್ನ ಜನರಾದ ಇಸ್ರಾಯೇಲರಿಗೆ ಪ್ರವಾದನೆ ಮಾಡು> ಎಂದು ನನಗೆ ಅಪ್ಪಣೆ ಕೊಟ್ಟನು.

16

<<ಈಗ ಯೆಹೋವನ ವಾಕ್ಯವನ್ನು ಕೇಳು. <ಇಸ್ರಾಯೇಲರಿಗೆ ವಿರುದ್ಧವಾಗಿ ಪ್ರವಾದನೆಮಾಡಬೇಡ. ಇಸಾಕನ ವಂಶಕ್ಕೆ ಖಂಡನೆಯಾಗಿ ಬಾಯಿ ಎತ್ತಬೇಡ> ಎಂದು ನಿನಗೆ ಹೇಳಿದ ಕಾರಣ ಯೆಹೋವನು ಇಂತೆನ್ನುತ್ತಾನೆ,

17 <ನಿನ್ನ ಹೆಂಡತಿಯು ಈ ಪಟ್ಟಣದಲ್ಲಿ ಸೂಳೆಯಾಗುವಳು;
ನಿನ್ನ ಗಂಡು ಮತ್ತು ಹೆಣ್ಣು ಮಕ್ಕಳು ಖಡ್ಗದಿಂದ ಹತರಾಗುವರು;
ನಿನ್ನ ದೇಶವನ್ನು ಶತ್ರುಗಳು ನೂಲಿನಿಂದ ವಿಭಾಗಿಸಿಕೊಳ್ಳುವರು;
ನೀನಂತೂ ಅಪವಿತ್ರವಾದ ದೇಶದಲ್ಲಿ ಸಾಯುವಿ,
ಇಸ್ರಾಯೇಲರು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವುದು ಖಂಡಿತ> >> ಎಂಬುದಾಗಿ ಯೆಹೋವನು ಹೇಳಿದನು.

Copyright information for KanULB